ತೂಗು ಸೇತುವೆ --
ಹಳ್ಳಕ್ಕೆ ಅಡ್ಡವಾಗಿ ಎರಡು ಬಲವಾದ ಬಳ್ಳಿಗಳನ್ನು ಮರಗಳಿಗೆ ಎಳೆದು ಕಟ್ಟಿ ಅವುಗಳಿಂದ ಮಟ್ಟ ಮತ್ತು ಹಗುರವಾದ ಸೇತುವೆಯನ್ನು ಪ್ರಾಚೀನ ಭಾರತದಲ್ಲಿ ತೂಗು ಹಾಕುತ್ತಿದ್ದರು.  ಈ ಪದ್ಧತಿ ಇಂದಿಗೂ ಕರ್ನಾಟಕದ ಮಲೆನಾಡಿನಲ್ಲಿ ಬಳಕೆಯಲ್ಲಿದೆ.  ಈ ನಮೂನೆಯ್ನು ಸ್ವತಂತ್ರವಾಗಿ ಚೀನ, ಆಫ್ರಿಕ ಮತ್ತು ದಕ್ಷಿಣ ಅಮೆರಿಕ ದೇಶಗಳಲ್ಲಿ ಕೂಡ ಹಳ್ಳಗಳನ್ನು ದಾಟುವುದಕ್ಕೆ ಉಪಯೋಗಿಸುತ್ತಿದ್ದರು.

ಮೊದಲನೆಯ ಆಧುನಿಕ ತೂಗುಸೇತುವೆ ಎಂದರೆ ವೇಲ್ಸಿನಲ್ಲಿ ಮಿನೈ ಜಲಸಂಧಿಯ ಮೇಲೆ ಥಾಮಸ್ ಪೆಲ್ಫಡ್ 1826 ರಲ್ಲಿ ನಿರ್ಮಿಸಿದ ಅಚ್ಚಕಬ್ಬಿಣದ ಸರಪಳಿಗಳಿಂದ ತೂಗುಹಾಕಿದ 176.80ಮಿ ಅಗಲದ ಕಣ್ಣಿನ ಸೇತುವೆ.  ಈಗ ಭಾರಿ ತೂಗುಸೇತುವೆಗಳಲ್ಲಿ ಬಳಸುತ್ತಿರುವ ಸಮಾಂತರವಾದ ಉಕ್ಕಿನ ತಂತಿಯ ಹೊರಜಿಗಳಿಗೂ ತೂಗುಸೇತುವೆಗಳು ಬಿಗುವಾಗಿ ಬಳುಕದ ಹಾಗೆ ಮಾಡಿರುವ ಕ್ರಮಕ್ಕೂ ನಾವು ಜಾನ್ ರೋಬ್ಲಿಂಗ್ ಮಹಾಶಯನಿಗೆ ಋಣಿಗಳಾಗಿದ್ದೇವೆ.  ಈತ ಜಗÀದ್ವಿಖ್ಯಾತನಾದ ನಯಾಗರ ಜಲಪಾತದ ಮೇಲೆ 250.20ಮಿ ಕಣ್ಣಿನ ರ್ಹೇಲ್ವೆ ತೂಗುಸೇತುವೆಯನ್ನು 1855 ರಲ್ಲಿಯೂ, ಸಿನ್‍ಸಿನಾಟಿ ನಗರದಲ್ಲಿ ಓಹಿಯೊ ನದಿಯಮೇಲೆ 322.80ಮಿ ಕಣ್ಣಿನ ತೂಗು ಸೇತುವೆಯನ್ನು 1867 ರಲ್ಲಿಯೂ ಕಟ್ಟಿಸಿದ.  ಇವನ ಮಹಾಸಾಧನೆಯೆಂದರೆ ನ್ಯೂಯಾರ್ಕ್ ನಗರದಲ್ಲಿ ಈಸ್ಟ್ ನದಿಯ ಮೇಲೆ 1883 ರಲ್ಲಿ ಕಟ್ಟಿದ 486.30ಮಿ ಕಣ್ಣಿನ ಬ್ರೂಕ್ಲಿನ್ ಸೇತುವೆ. ಈ ಕೆಲಸದ ಮೇಲಿದ್ದಾಗಲೇ ಇವನು ಅಪಘಾತದಲ್ಲಿ ಅಸು ತೆತ್ತು ಚಿರಸ್ಮರಣೀಯನಾದ.  ಆಮೇಲೆ ಇವನ ಮಗ ವಾಷಿಂಗ್ಟನ್ ರೋಬ್ಲಿಂಗ್ ಈ ಕೆಲಸವನ್ನು ಪೂರೈಸಿದ.

ಇದಾದ ಬಳಿಕ ಈ ಶತಮಾನದಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ ಉದ್ದವಾದ ತೂಗುಸೇತುವೆಗಳ ಯುಗ ಪ್ರಾರಂಭವಾಯಿತು ಎನ್ನಬಹುದು. : ನ್ಯೂಯಾರ್ಕಿನಲ್ಲಿ ಈಸ್ಟ್ ನದಿಯ ಮೇಲೆ 487.70ಮಿ ಕಣ್ಣಿನ ವಿಲಿಯಂಸ್‍ಬರ್ಗ್ ಸೇತುವೆ (1903), ಡೆಟ್ರಾಯಿಟ್ ನಗರದಲ್ಲಿ 563.90ಮಿ ಕಣ್ಣಿನ ಅಂಬಾಸಡರ್ ಸೇತುವೆ (1928).  ಇವು ಮುಗಿದ ಮೇಲೆ ನ್ಯೂಯಾರ್ಕಿನಲ್ಲಿ ಹಡ್ಜನ್ ನದಿಯ ಮೇಲೆ 3,500' ಕಣ್ಣಿನ ಜಾರ್ಜ್ ವಾಷಿಂಗ್ಟನ್ ಸೇತುವೆಯೂ (1931), ಕ್ಯಾಲಿಫೋರ್ನಿಯದ ಸ್ಯಾನ್‍ಫ್ರಾನ್ಸಿಸ್ಕೋ ನಗರದಲ್ಲಿ 1280.20ಮಿ ಕಣ್ಣಿನ ಗೋಲ್ಡನ್ ಗೇಟ್ ಸೇತುವೆಯೂ (1937) ನಿರ್ಮಾಣವಾದವು.  ಎರಡನೆಯ ಮಹಾಯುದ್ಧ ಮುಗಿದ ಮೇಲೆ 1949 ರಲ್ಲಿ ನ್ಯೂಯಾರ್ಕ್ ಬಂದರಿನ ಪ್ರವೇಶ ಮಾರ್ಗದಲ್ಲಿ 1408.20ಮಿ ಕಣ್ಣಿನ ನ್ಯಾರೋಸ್ ಸೇತುವೆಯನ್ನು ಮಂಜೂರು ಮಾಡಿದರು. ತಾತ್ತ್ವಿಕವಾಗಿ 2133ಮಿ ಕಣ್ಣಿನ ವರೆಗೂ ಈ ನಮೂನೆಯ ಸೇತುವೆಯನ್ನು ಕಟ್ಟಬಹುದು.

ಸಮಾಂತರ ತಂತಿಯ ಹೊರಜಿಯ ನಮೂನೆಯಲ್ಲದೇ ಕುಣಿಕೆಗಳಿಂದಲೂ ಪೂರ್ವಸಂಮರ್ದಿತ (ಫ್ರೀಸ್ಟ್ರೆಸ್ಡ್) ತಿರುಚಿದ ಉಕ್ಕಿನ ತಂತಿಯ ಹಗ್ಗಗಳಿಂದಲೂ ತೂಗುಸೇತುವೆಗಳನ್ನು ನಿರ್ಮಿಸಿದ್ದಾರೆ.  ದಕ್ಷಿಣ ಅಮೆರಿಕದಲ್ಲಿ ಬ್ರಜಿûಲ್‍ನಿಂದ ಅಟ್ಲಾಂಟಿಕ್ ಸಾಗರದ ಪ್ಲೋರಿಯಾನೋಪೋಲಿಸ್ ದ್ವೀಪ ನಗರಕ್ಕೆ ಕುಣಿಕೆಗಳಿಂದ ತೂಗುಹಾಕಿರುವ 339.50ಮಿ ಕಣ್ಣಿನ ತೂಗುಸೇತುವೆಯನ್ನು 1926 ರಲ್ಲಿ ಪೂರೈಸಿದರು.  ಇದು ಹಳೆಯ ನಮೂನೆಗಿಂತ ಬಿಗುವಾಗಿ ಬಳುಕಿದಂತಿದೆ.  ಇದರಲ್ಲಿ ಇನ್ನೂ ಕಡಿಮೆ ಉಕ್ಕನ್ನು ಉಪಯೋಗಿಸಿದ್ದಾರೆ.  ಬ್ರೂಕ್ಲಿನ್ ಸೇತುವೆಯಲ್ಲಿನ ಹಾಗೆ ಸಮಾಂತರವಾದ ಉಕ್ಕಿನ ತಂತಿಗಳನ್ನು ಈ ಕಡೆಯಿಂದ ಆ ಕಡೆಗೂ ಮತ್ತೆ ಈ ಕಡೆಗೂ ಎಳೆಯುವುದರಲ್ಲಿ ಆಗುವ ಸಾವಕಾಶವನ್ನು ತಪ್ಪಿಸುವುದಕ್ಕಾಗಿ ಮೂರನೆಯ ನಮೂನೆಯಲ್ಲಿ ಪೂರ್ವಸಂಮರ್ದಿತ ತಿರುಚಿದ ತಂತಿಯ ಹಗ್ಗವನ್ನು ಉಪಯೋಗಿಸಿ ಕ್ವಿಬೆಕ್ಕಿನಲ್ಲಿ 289.60ಮಿ ಕಣ್ಣಿನ ತೂಗು ಸೇತುವೆಯನ್ನೂ (1920) ವ್ಯಾಂಕೋವರಿಯಲ್ಲಿ 502.9ಮಿ ಕಣ್ಣಿನ ಲಯನ್ಸ್‍ಗೇಟ್ ಸೇತುವೆಯನ್ನೂ (1930) ಕಟ್ಟಿದ್ದಾರೆ.

ಅಗಾಧವಾದ ಸ್ಯಾನ್ ಫ್ರಾನ್ಸಿಸ್ಕೊ-ಓಕ್ಲಂಡ್ ಸೇತುವೆಯ ಪಶ್ಚಿಮದ ಸ್ಯಾನ್ ಫ್ರಾನ್ಸಿಸ್ಕೊ ಕಡೆಯ ಭಾಗದಲ್ಲಿ 704ಮಿ ಎರಡು ಕಣ್ಣುಗಳ ತೂಗುಸೇತುವೆ ಇದೆ.  ಈ ಸೇತುವೆಯಲ್ಲಿ 17,464 ಉಕ್ಕಿನ ತಂತಿಗಳಿರುವ 71.8ಸೆಂ.ಮಿ ವ್ಯಾಸದ ಎರಡು ಹೊರಜಿಗಳಿವೆ.  ತಂತಿಯ ವ್ಯಾಸ 4.95ಮಿ.ಮಿ, ಉದ್ದ 113.30ಕಿ.ಮಿ ಅಂದರೆ ಭೂಮಿಯ ಸುತ್ತಳೆಯ ಸುಮಾರು ಮೂರರಷ್ಟು; ವಾಹನಗಳು ಓಡಾಡುವ 17.70ಮಿ ಅಗಲದ ಎರಡು ಅಟ್ಟಗಳನ್ನು ದೊಡ್ಡ ಹೊರಜಿಗಳಿಂದ 70ಮಿ.ಮಿ ವ್ಯಾಸದ ತಂತಿಯ ಹಗ್ಗಗಳಿಂದ ತೂಗಹಾಕಿದೆ.  ಮೇಲುಗಡೆಯ ಅಟ್ಟದಲ್ಲಿ ಒಂದರ ಪಕ್ಕದಲ್ಲಿ ಒಂದು 15 ಟನ್ ತೂಕದ ಮೋಟರುಗಳೂ ಕೆಳಗಿನದರಲ್ಲಿ 40 ಟನ್ ತೂಕದ ಮೂರು ಮೋಟರ್ ಟ್ರಕ್ಕುಗಳೂ  ಎರಡು ವಿದ್ಯುತ್ತಿನ ರೇಲ್ವೆಗಳೂ ಓಡಾಡಬಹುದು.

ನ್ಯೂಯಾರ್ಕಿನಲ್ಲಿ ಹಡ್ಸನ್ ನದಿಯ ಮೇಲೆ 1925 ರಲ್ಲಿ 1066.80ಮಿ ಕಣ್ಣಿನ ಜಾರ್ಜ್ ವಾಷಿಂಗ್‍ಟನ್ ಸೇತುವೆ ಪ್ರಾರಂಭವಾಯಿತು. ಅದಕ್ಕೆ ಮುಂಚೆ, ಫಿಲಡೆಲ್ಫಿಯದಲ್ಲಿ ಡಿಲಾವೇರ್ ನದಿಯ ಮೇಲಿನ 533.40ಮಿ ಒಂದು ಕಣ್ಣಿನ ಸೇತುವೆಯೇ ಅತ್ಯಂತÀ ಉದ್ದವಾದದ್ದಾಗಿತ್ತು.  ಅದರಲ್ಲಿ ನೀರಿನ ಮಟ್ಟದ ಮೇಲೆ ಮೊದಲು 36.60ಮಿ ಅಗಲದ ಒಂದು ಅಟ್ಟವಿತ್ತು.  ಈ ಸಂವಿಧಾನದಲ್ಲಿ ಒಂದು ವಿಶೇಷವೇನೆಂದರೆ ಈಗ ಅನಾವಶ್ಯಕವಾಗಿ ಕಂಡರೂ ಮುಂದೆ ಬೆಳೆಯಲಿರುವ ಸಂಚಾರಾನುಕೂಲಗಳಿಗೆ ದೂರದೃಷ್ಟಿಯಿಂದ ಅವಕಾಶಮಾಡಿರುವುದು. ಈಚೆಗೆ ಕೆಳಗಡೆ ಒಂದು ಅಟ್ಟವನ್ನು ತಗಲಿಸಿದ ಮೇಲೆ ಮೇಲಿನ ಅಟ್ಟದಲ್ಲಿ ಪಕ್ಕಪಕ್ಕದಲ್ಲಿ ಎಂಟು ವಾಹನಗಳೂ ಎರಡು ಕಾಲುದಾರಿಗಳೂ ಕೆಳಗಿನದರಲ್ಲಿ ಚುರುಕಾಗಿ ಎಂಟು ರೇಲ್ವೆ ಸಾಲುಗಳೂ ಇವೆ.

ಹಡ್ಸನ್ ನದಿಯ ಎರಡು ದಡಗಳಲಿಯೂ ಇರುವ ಉಕ್ಕಿನ ಸ್ತಂಭಗಳು ನೀರಿನ ಮಟ್ಟದ ಮೇಲೆ 183.90ಮಿ ಎತ್ತರವಾಗಿವೆ. ಈ ಸ್ತಂಭಗಳಲ್ಲಿ 43,000 ಟನ್ ಉಕ್ಕು ಸೇರಿದೆ.  ಸ್ತಂಭಗಳ ಮಧ್ಯೆ ತಂತಿಯ ಹೊರಜಿಗಳಿವೆ.  ಇವು ಸ್ತಂಭÀಗಳನ್ನು ಒಳಕ್ಕೆ ಎಳೆಯುತ್ತವೆ.  ಬಟ್ಟೆಗಳನ್ನು ಹರಡುವುದಕ್ಕೆ ಎರಡು ಕಂಬಗಳ ನಡುವೆ ದಾರವನ್ನು ಕಟ್ಟಿದಾಗ ಅದು ತಾಳುವ ರೂಪವನ್ನೇ (ಕ್ಯಾಟೆನರಿ ಯಾ ತೂಗುಸರಪಣಿ) ತೂಗು ಸೇತುವೆಯ ತಂತಿ ತಾಳುತ್ತದೆ.  ಹೊರಜಿಯ ಎಳೆತವನ್ನು ಗೋಪುರಗಳು ತಡೆದ ಮೇಲೆ ಹೊರಜಿಗಳು ಆಚೆಗೆ ಬಳುಕಿ ಹಾದು ನೆಲದ ಕೆಳಗೆ ಇರುವ ಭಾರಿ ಕಾಂಕ್ರೀಟಿನ ದಿಮ್ಮಿಯಲ್ಲಿ ಅಂತರ್ಗತವಾಗುತ್ತವೆ.  ಹೊರಜಿಗಳಿಗೆ ಈ ರೀತಿ ಎರಡು ಕಡೆಗಳಲ್ಲಿಯೂ ಹಡಗಿಗೆ ಲಂಗರು ಇರುವ ಹಾಗೆ ಬಲವಾದ ಅವಲಂಬನಗಳಿವೆ.  ಕಡಿಯದÀ ಒಂದೇ ಉಕ್ಕಿನ ತಂತಿಗಳು ಒಂದಕ್ಕೊಂದು ತೊಡರಿಕೊಳ್ಳದ ಹಾಗೆ ಈ ಕಡೆಯಿಂದ ಆ ಕಡೆಗೆ ಎಳೆದು ಎಳೆಗಳನ್ನು ಮಾಡಿ ಅದನ್ನು ಒಂದರ ಪಕ್ಕದಲ್ಲಿ ಒಂದು ತಿರುಚಿಕೊಳ್ಳದಂತೆ ಕೂಡಿಸಿ ಹೊರಜಿಯನ್ನು ಮಾಡುತ್ತಾರೆ.  
ಉಕ್ಕಿನ ತಂತಿಯ ದಪ್ಪ 5ಮಿಮಿ.  ಈ ಸೇತುವೆಯಲ್ಲಿ ಒಂದೊಂದು ಹೊರಜಿಯಲ್ಲಿಯೂ 61 ಎಳೆಗಳಿವೆ.  ಒಂದು ಎಳೆಯಲ್ಲಿ 434 ತಂತಿಗಳಿವೆ.  ಹೊರಜಿಯ ತಂತಿಯ ಉದ್ದ  468,000ಕಿಮಿ ತೂಕ 2800 ಟನ್ನುಗಳು.  ತಂತಿಯ ಎಳೆತದ ಬಿರಿತ ಒತ್ತಾಯ (ಬ್ರೇಕಿಂಗ್ ಟೆನ್ಸೈಲ್ ಸ್ಟ್ರೆಸ್) ಚದರ ಅಂಗುಲಕ್ಕೆ 100 ಟನ್ನುಗಳು.  ಸೇತುವೆಯಲ್ಲಿ ಇರುವ ಒಟ್ಟು ಉಕ್ಕಿನ ತೂಕ 1,03,000 ಟನ್ನುಗಳು. ಕಟ್ಟುವುದಕ್ಕೆ 4 1/2 ವರ್ಷ ಹಿಡಿಯಿತು.  6 ಕೋಟಿ ಡಾಲರುಗಳು ಖರ್ಚಾದವು.  ಹೊರಜಿಯ ಒಂದೊಂದು ಎಳೆಗೂ ಅವಲಂಬನದಲ್ಲಿ ಒಂದೊಂದು ಕುಣಿಕೆ ಕಂಡಿಯೂ ಅದರ ಹೊರಗಡೆ ದಪ್ಪವಾದ ತಾಂಡವಾಳದ ಕುದುರೆಯ ಲಾಳವೂ ಇವೆ.  ಉಕ್ಕಿನ ತಂತಿಗಳನ್ನು ಒಂದಕ್ಕೊಂದು ಹೊಸೆಯದ ಹಾಗೆ ಮಾಲಾಕಾರವಾಗಿ ಈ ಕಡೆಯ ಅವಲಂಬನದಿಂದ ಹಿಡಿದು ಮೇಲಕ್ಕೆ ಗೋಪುರದ ತುದಿಗೂ ಅಲ್ಲಿಂದ ಆ ಕಡೆಯ ಗೋಪುರದ ತುದಿಗೂ ಆಮೇಲೆ ಆಚೆಯ ಅವಲಂಬನಕ್ಕೂ ತಿರುಗಿಹಿಂದಕ್ಕೆ ಅದೇ ದಾರಿಯಲ್ಲಿಯೇ ನೂಲುವುದು ಮಹಾಪ್ರಯಾಸದ ಕೆಲಸ.  ಈ ಕೆಲಸಕ್ಕೆ ಅನುಕೂಲವಾಗುವ ಹಾಗೆ ಇದೇ ದಾರಿಯಲ್ಲಿ ಕಾಲುಹಾದಿಗಳನ್ನು 7.60ಮಿ ಅಗಲವಾಗಿ ಹಗುರವಾದ ಉಕಿನ ಚೌಕಟ್ಟಿನಿಂದ ಮಾಡಿದರು.  ಮೊದಲು ಅವಲಂಬನದಿಂದ ಸ್ತಂಭಕ್ಕೂ ಒಂದು ಸ್ತಂಭದಿಂದ ಇನ್ನೊಂದು ಸ್ತಂಭÀಕ್ಕೂ ತಾತ್ಕಾಲಿಕವಾಗಿ ದಪ್ಪವಾದ ತಂತಿಯ ಹಗ್ಗವನ್ನು ಎಳೆದುಅದರಿಂದ ಓಡಾಡುವ ಗಾಡಿಯನ್ನು ಇಳಿಯಬಿಟ್ಟಿದ್ದರು.  ಈ ಗಾಡಿ ಮುಂದಕ್ಕೆ ಹೋದ ಹಾಗೆ ಕಾಲುಹಾದಿಯನ್ನು ಕಟ್ಟುತ್ತ ಹೋದರು.  ಹೀಗೆ ನಡುವೆ ನೀರಿನ ಮಟ್ಟದ ಮೇಲೆ 45.70ಮಿ ಎತ್ತರವೂ ಸ್ತಂಭದ ತುದಿಗಳಲ್ಲಿ 183.9ಮಿ ಎತ್ತರವೂ ಇರುವ ನಾಜೂಕಾದ ಜಗಲಿಗಳ ಮೇಲೆ ಸಾವಿರಾರು ಮೈಲಿಗಳ ಉದ್ದದ ತಂತಿಯನ್ನು ಎಳೆದಿದ್ದಾರೆ.

ಸೆಳೆಯುವ ಹಗ್ಗವೊಂದರ ಸಹಾಯದಿಂದ ತಂತಿಯ ಎಳೆಗಳನ್ನು ಬ್ರೂಕ್ಲಿನ್ ಸೇತುವೆಯಲ್ಲಿನ ಹಾಗೆಯೇ ಜೋಡಿಸಿದ್ದಾರೆ.  ಎರಡು ಕಪ್ಪಿಗಳ ಮೇಲೆ ಕೊನೆಯಿಲ್ಲದ ಈ ಹಗ್ಗ ವಿದ್ಯುತ್ತಿನ ಮೋಟರಿನ ಬಲದಿಂದ ಸುತ್ತುತ್ತದೆ.  ಇದಕ್ಕೆ ತಗಲಿದ ಹಾಗೆ ಎರಡು ಅಲೆದಾಡುವ ಕಪ್ಪಿಗಳಿವೆ.  ತಂತಿಯ ಸುರುಳಿಯಿಂದ ಎರಡು ತಂತಿಗಳು ಒಂದು ಕಪ್ಪಿಯ ಸುತ್ತ ಹೋಗಿ ಅವಲಂಬನದ ಕುದುರೆ ಲಾಳಕ್ಕೆ ಹೋಗುತ್ತದೆ.  ಅದೇ ಕಾಲದಲ್ಲಿ ಆ ಕಡೆಯಿಂದ ಸೆಳೆಯುವ ಹಗ್ಗದ ಕೆಳಗಡೆ ತಗಲಿಸಿರುವ ಮತ್ತೊಂದು ಅಲೆದಾಡುವ ಕಪ್ಪಿಇನ್ನೂ ತಂತಿಗಳನ್ನು ಸಾಗಿಸುತ್ತದೆ.  ಈ ತಂತಿಗಳು ಅವುಗಳ ಪ್ರಯಾಣ ಮುಗಿದ ಬಳಿಕ ಆ ಕುದುರೆಲಾಳದ ಕುಣಿಕೆಯ ಸುತ್ತ ಸುತ್ತುತ್ತದೆ.  ಆಮೇಲೆ ಅಲೆದಾಡುವ ಕಪ್ಪಿ ಆ ಕಡೆಯ ಸುರುಳಿಯಿಂದ ಇನ್ನೆರಡು ತಂತಿಗಳನ್ನು ಎಳೆದುಕೊಂಡು ಮರುಪ್ರಯಾಣ ಮಾಡುತ್ತದೆ.  ಹೀಗೆ ಅಲೆದಾಡುವ ಕಪ್ಪಿಗಳು 217 ಸಾರಿ ಸಂಚರಿಸಿದರೆ 434 ತಂತಿಗಳ ಒಂದು ಎಳೆಯಾಯಿತು.  ಈ ಎಳೆಯಲಿ ಒಂದೊಂದು ತಂತಿಯನ್ನು ಕ್ಯಾಟೆನರಿಯ ವಕ್ರಾಕೃತಿಗೆ ಸರಿಯಾಗಿ ಎಚ್ಚರಿಕೆಯಿಂದ ಜೋಡಿಸುತ್ತಾರೆ.  ಇಂಥ 61 ಎಳೆಗಳಿಂದ ತಯಾರಾದ ಒಂದು ಹೊರಜಿಯನ್ನು ಅದು ತಿರುಗುತ್ತಿರುವಾಗ ಅದುಮಿ ಮೊದಲು 96.50ಸೆಂ.ಮಿ ಗೂ ಆಮೇಲೆ 91.40ಸೆಂ.ಮಿ ವ್ಯಾಸಕ್ಕೂ ಇಳಿಸುತ್ತಾರೆ. ಈ ಹೊರಜಿಗಳು ಆವಲಂಬನದಲ್ಲಿ ಭದ್ರವಾದ ಮೇಲೆ ಮೊದಲು ಕಾಲುಹಾದಿಗಳನ್ನು ತಗಲಿಸುವುದಕ್ಕೆ ಉಪಯೋಗಿಸುತ್ತಿದ್ದ 73ಮಿಮಿ ವ್ಯಾಸದ ತಂತಿಯ ಹುರಿಗಳಿಂದ ನೀರಿನಮಟ್ಟದ ಮೇಲೆ 45.70ಮಿ ಎತ್ತರದಲ್ಲಿ ರಸ್ತೆಯ ಅಟ್ಟವನ್ನು ತೂಗುಹಾಕುತ್ತಾರೆ.

ಗೋಲ್ಡ್‍ನ್ ಗೇಟ್ ಸೇತುವೆ :  ಈ ತೂಗುಸೇತುವೆಯನ್ನು ಇಂಜಿನಿಯರಿಂಗ್‍ನ ಅದ್ಭುತಗಳಲ್ಲಿ ಒಂದೆನ್ನಬಹುದಾಗಿದೆ.  ಇದು ಸ್ಯಾನ್ ಫ್ರಾನ್ಸಿಸ್ಕೋ ಖಾರಿಗೆ ಸಮುದ್ರ ಪ್ರವೇಶಿಸುವ ಕಡೆ ಸ್ತಂಭಗಳ ನಡುವೆ 1280ಮಿ ಅಗಲವಾಗಿವೆ.  ಇದರ ಗೋಪುರಗಳು ನೀರಿನ ಮಟ್ಟದ ಮೇಲೆ 746'ಎತ್ತರವಾಗಿವೆ.  ಕಂಬದ ತಳಪಾಯಗಳು ನೀರಿನ ಕೆಳಗೆ 30.50ಮಿ ಆಳದಲ್ಲಿವೆ.  ಪಾಯದಲ್ಲಿ ತೋಡುವಾಗ ಒತ್ತಡದ ಗಾಳಿಯ ಕೆಸನ್ನುಗಳನ್ನು ಉಪಯೋಗಿಸಿದರು.  ಒಂದೊಂದು ಸ್ತಂಭÀದ ಮೇಲೂ ತಂತಿಯ ಹೊರಜಿಗಳನ್ನ ಹಿಡಿಯುವುದಕ್ಕೆ 169 ಟನ್ ತೂಕದ ಎರಡು ತೊಟ್ಟಿಲುಗಳಿದ್ದುವು.  ಹೊಜಿಗಳ ವ್ಯಾಸ 92.70ಸೆಂ.ಮಿ  ಅವುಗಳಲ್ಲಿ 1,28,000ಕಿಮಿ ಉದ್ದದ ಉಕ್ಕಿನ ತಂತಿಗಳಿವೆ.  ವಾಷಿಂಗ್ಟನ್ ಸೇತುವೆಯಲ್ಲಿನ ಹಾಗೆಯೇ ಕಾಂಕ್ರೀಟಿನ ಬೃಹದಾಕಾರವಾದ ದಿಮ್ಮಿಗಳಲ್ಲಿ ಉಕ್ಕಿನ ಕುಣಿಕೆಗಳಲ್ಲಿ ಹೊಜಿಗಳನ್ನು ಭದ್ರಪಡಿಸಿದ್ದಾರೆ.  ಸ್ತಂಭಗಳ ನಿರ್ಮಾಣಕ್ಕೂ ಆ ಎತ್ತರದಲ್ಲಿ ಕಾಲುದಾರಿಗಳನ್ನು ಮಾಡಿ ಅವುಗಳ ಮೇಲೆ ನಡೆದು ಕೆಲಸಮಾಡುವುದಕ್ಕೂ ಕೆಲಸಗಾರರಲ್ಲಿ ಅಪಾರವಾದ ಕಾಲಿನ ಬಿಗಿಯೂ ನರಗಳ ಸಮತೂಕವೂ ಬೇಕಾಗಿತ್ತು.  ಆದರೂ ಈ ಸೇತುವೆಯಲ್ಲಿ ಒಂದಾದರೂ ಸಾವು ಒದಗಲಿಲ್ಲ.  1949ರ ವರೆಗೂ ಇದೇ ಪ್ರಪಂಚದಲ್ಲಿ ಅತ್ಯಂತ ದೀರ್ಘವಾದ ಕಣ್ಣಿನ ತೂಗು ಸೇತುವೆಯಾಗಿತ್ತು.  ಆ ವರ್ಷ ನ್ಯೂಯಾರ್ಕಿನ ಬಂದರಿನಲ್ಲಿ 1408.2ಮಿ ಕಣ್ಣಿನ ನ್ಯಾರೋಸ್ ಸೇತುವೆ ಪ್ರಾರಂಭವಾಯಿತು.  (ಎಚ್.ಸಿ.ಕೆ.) 

ವಿಶ್ವದ ಅತಿ ಅಗಲ ಕಣ್ಣು ಇರುವುದು ಜಪಾನಿನ ಅಕಾಶಿ ಕೈಕ್ಯೋ ತೂಗು ಸೇತುವೆಯಲ್ಲಿ. ಇದರ ಅಗಲವು 1991ಮೀ. ಈ ಸೇತುವೆಯ "ಸೇತುವೆಗಳ ರಾಜ" ಎಂದು ಪ್ರಖ್ಯಾತವಾಗಿದೆ. 2010ನೇ ಇಸವಿಯ ವೇಳೆಗೆ ಕಣ್ಣಿನ ಅಗಲವು 3360ಮೀ ಮೀರಲಿದೆ. ಈ ಬೃಹತ್ ಕಣ್ಣಿರುವ ತೂಗು ಸೇತುವೆಯ ಮೆಸ್ಸಿನ ಖಾರಿಯ ಮೇಲೆ ಹಾದು ಹೋಗಿ ಯೂರೋಪನ್ನು ಸಿಸಿಲಿ ದ್ವೀಪದೊಂದಿಗೆ ಸೇರಿಸಲಿದೆ. ತೂಗುಸೇತುವೆಯ ಸುಧಾರಿತ ರೂಪ-ಕೇಬಲ್ ಸ್ಟೇ ಸೇತುವೆ.      (ನೋಡಿ- ಸೇತುವೆ)			*
(ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ